ನೂನಿಜ್ ಫರ್ನೌ
	16ನೆಯ ಶತಮಾನದ ಪೊರ್ಚುಗೀಸ್ ಪ್ರವಾಸಿ ಹಾಗೂ ವ್ಯಾಪಾರಿ. 1535ರಲ್ಲಿ ವಿಜಯನಗರಕ್ಕೆ ಬಂದು ಮೂರು ವರ್ಷಗಳ ಕಾಲ ತಂಗಿದ್ದ; ಸಾಮ್ರಾಜ್ಯದಲ್ಲೆಲ್ಲ ವ್ಯಾಪಕವಾಗಿ ಸಂಚರಿಸಿದ. ಇವನು ಕುದುರೆ ವ್ಯಾಪಾರ ನಡೆಸುತ್ತಿದ್ದನೆಂದು ತಿಳಿದುಬರುತ್ತದೆ. ಇವನು ಕಂಡು ಕೇಳಿದ ಮತ್ತು ಅನುಭವದಿಂದ ಪಡೆದ ವಿಚಾರಗಳನ್ನು ವಿವರವಾಗಿ ಬರೆದು ದಾಖಲೆಯಾಗಿ ಬಿಟ್ಟು ಹೋಗಿದ್ದಾನೆ. ವಿಜಯನಗರದ ನಿಜವಾದ ಇತಿಹಾಸವನ್ನು ತಿಳಿಯಲು ಇವನ ದಾಖಲೆ ಬಹಳ ಉಪಯುಕ್ತವಾಗಿದೆ. ಇತರ ಪ್ರವಾಸಿಗಳ ದಾಖಲೆಗಳಿಗಿಂತ ಇವನದು ವಿಸ್ತಾರವಾಗಿಯೂ ಖಚಿತವಾಗಿಯೂ ಇದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಕಾಲದಿಂದ ಕೃಷ್ಣದೇವರಾಯನ ಕಾಲದವರೆಗಿನ ಇತಿಹಾಸದ ಘಟನೆಗಳ ವರ್ಣನೆ ಇಲ್ಲಿದೆ. ಸಮಕಾಲೀನ ಮುಸ್ಲಿಂ ಇತಿಹಾಸಕಾರರಾಗಲೀ, ಕೃಷ್ಣದೇವರಾಯನಿಗೆ ಸಂಬಂಧಿಸಿದ ಸುಮಾರು 300 ಶಾಸನಗಳಾಗಲೀ ಸಮಕಾಲೀನ ದೇಶಿಯ ಶಾಸನಗಳಾಗಲೀ ಆ ಕಾಲದ ದಕ್ಷಿಣ ಭಾರತದ ಇತಿಹಾಸದ ಮೇಲೆ ಈ ಬರವಣಿಗೆಯಷ್ಟು ಬೆಳಕು ಚೆಲ್ಲಿಲ್ಲ. ಆಧುನಿಕ ಇತಿಹಾಸಕಾರರೆಲ್ಲ ನೂನಿಜûನ ದಾಖಲೆಗೆ ಪ್ರಾಧಾನ್ಯ ನೀಡಿದ್ದಾರೆ; ವಿಜಯನಗರದ ಇತಿಹಾಸ ರಚನೆಯಲ್ಲಿ ಅದನ್ನು ಉಪಯೋಗಿಸಿಕೊಂಡಿದ್ದಾರೆ. ವಿಜಯನಗರದ ಪ್ರಥಮ ರಾಜವಂಶ ಅಳಿದುದರ ಕಾರಣ, ತರುವಾಯ ನರಸಿಂಹ ಸಿಂಹಾಸವನ್ನಾಕ್ರಮಿಸಿದ್ದು-ಈ ವಿವರಗಳು ನೂನಿಜûನ ದಾಖಲೆಗಳಿಂದ ಮೊಟ್ಟ ಮೊದಲು ತಿಳಿದುಬಂದವು. ಕೃಷ್ಣದೇವರಾಯನ ತರುವಾಯ ಅರಸನಾದ ದುರ್ಬಲ ಅಚ್ಯುತರಾಯನ ಗುಣಾವಗುಣಗಳನ್ನು ಇವನು ತನ್ನ ಸ್ವಂತ ತಿಳುವಳಿಕೆಗಳಿಂದ ಬರೆದಿದ್ದಾನೆ. ವಿಜಯನಗರದ ಆಗಿನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನೂ ಇತಿಹಾಸವನ್ನೂ ತಿಳಿಸುವ ಈ ಅನುಭವಗಳನ್ನು ಇವನು 1537ರಲ್ಲಿ ಪೋರ್ಚುಗೀಸ್ ಭಾಷೆಯಲ್ಲಿ ಬರೆದ. ವಿಜಯನಗರದ ವೈಭವ, ಆಗ ಜಾರಿಯಲ್ಲಿದ್ದ ಸಹಗಮನ ಪದ್ಧತಿ, ಬಹುಪತ್ನಿತ್ವ, ಬಾಲ್ಯ ವಿವಾಹ, ಅರಮನೆಯ ಸ್ತ್ರೀಯರು ಕತ್ತಿ ವರಸೆ, ಕುಸ್ತಿ ಮತ್ತು ಕಾಳಗಗಳಲ್ಲಿ ಪ್ರಾವೀಣ್ಯ ಪಡೆದಿದ್ದುದು ಮೊದಲಾದ ವಿವರಗಳನ್ನೆಲ್ಲ ಇವನು ನೀಡಿದ್ದಾನೆ. ಈ ಬರವಣಿಗೆಯನ್ನು ಸಿವೆಲ್ ಎಂಬ ಪಂಡಿತ ಇಂಗ್ಲಿಷ್‍ಗೆ ಅನುವಾದ ಮಾಡಿ 1901ರಲ್ಲಿ ಪ್ರಕಟಿಸಿದ.								(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ